ತಿಳಿಮುಗಿಲ ತೊಟ್ಟಿಲಲ್ಲಿ
ತಿಳಿಮುಗಿಲ ತೊಟ್ಟಿಲಲ್ಲಿ
ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ
ತೂಗುತ್ತಿತ್ತು||
ಗರಿಮುದುರಿ ಮಲಗಿದ್ದ
ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ
ಸಾಗುತ್ತಿತ್ತು ||
ಮುಗುಳಿರುವ ಹೊದರಿನಲಿ
ನರುಗಂಪಿನುದರದಲಿ
ಜೇನುಗನಸಿನ ಹಾಡು
ಕೇಳುತ್ತಿತ್ತು ||
ತುಂಬುನೀರಿನ ಹೊಳೆಯೊಳ
ಅಂಬಿಗನ ಕಿರುದೋಣಿ
ಪ್ರಸ್ಥಾನಗೀತೆಯನು
ಹೇಳುತ್ತಿತ್ತು||
ಬರುವ ಮುಂದಿನ ದಿನದ
ನವ ನವೋದಯ ಕಾಗಿ
ಪ್ರಕೃತಿ ತಪವಿರುವಂತೆ
ತೋರುತ್ತಿತ್ತು ||
ಶಾಂತರೀತಿಯೊಳ ಇರುಳು
ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯ
ಸಾರುತ್ತಿತ್ತು ||
